ಪೆಡ್ಯಾಲಿಯೇಸೀ   
ದ್ವಿದಳ ಧಾನ್ಯ ಸಸ್ಯಗಳ ಗುಂಪಿನ ಒಂದು ಕುಟುಂಬ. ಕರಿಎಳ್ಳು, ಹುಲಿ ಉಗುರಿನ ಗಿಡ ಮುಂತಾದವು ಈ ಕುಟುಂಬಕ್ಕೆ ಸೇರಿವೆ.  ಈ ಕುಟುಂಬಕ್ಕೆ ಸೇರಿದ ಸಸ್ಯಗಳು ಪ್ರಧಾನವಾಗಿ ಮೂಲಿಕೆಗಳು.  ಇವುಗಳ ಎಲೆಗಳು ಸರಳ ರೀತಿಯವು; ಅಭಿಮುಖ ಇಲ್ಲವೆ ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿರುವವು.  ವೃಂತಪರ್ಣಗಳಿಲ್ಲ.  ಎಲೆಗಳ ಮೈಮೇಲೆ ಅಂಟನ್ನು ಸ್ರವಿಸುವ ಕೂದಲುಗಳುಂಟು.  ಹೂಗಳು ಒಂಟಿಯಗಿಯೊ ಪುಷ್ಪಮಂಜರಿಗಳಲ್ಲೊ ಅರಳುತ್ತವೆ.  ದಳಗಳು ಸಂಯುಕ್ತ ಬಗೆಯವು.  ದಳಸಮೂಹ ಕೊಳವೆಯಂತಿದೆ.  5 ಪುಷ್ಪದಳಗಳಲ್ಲಿ 2 ಪರಸ್ಪರ ಅಂಟಿಕೊಂಡು ಮೇಲ್ದುಟಿಯಾಗಿಯೂ 3 ಒಂದಕ್ಕೊಂದು ಅಂಟಿಕೊಂಡು ಕೆಳದುಟಿಯಾಗಿಯೂ ಮಾರ್ಪಟ್ಟಾಗಿವೆ.  ದಳಗಳ ಬಣ್ಣ ಬಿಳಿ ಇಲ್ಲವೇ ನೇರಿಳೆ.  ಕೇಸರಗಳು 4, ಪುಷ್ಪದಳದ ಕೊಳವೆಯ ಒಳಗಡೆ ಅಂಟಿಕೊಂಡಿವೆ.  ಇವುಗಳಲ್ಲಿ 2 ಚಿಕ್ಕವು ಮತ್ತು 2 ದೊಡ್ಡವು.  ಅಂಡಾಶಯ 2 ಕಾರ್ಪೆಲ್‍ಗಳಿಂದ ರಚಿತವಾಗಿದೆ.  ಅಂಡಕಗಳು ಅಸಂಖ್ಯ.  ಕಾಯಿ ಗಟ್ಟಿ ಕವಚದಿಂದ ಕೂಡಿರುವ ಡ್ರೂಪ್ ಅಥವಾ ಒಡೆಯುವ ಸಂಪುಟ (ಕ್ಯಾಪ್ಸೂಲ್).

	ಪೆಡ್ಯಾಲಿಸೀಯೇ ಕುಟುಂಬದಲ್ಲಿ 16 ಜಾತಿಗಳೂ 60 ಪ್ರಬೇಧಗಳೂ ಇವೆ.  ಆಸ್ಟ್ರೇಲಿಯ, ದಕ್ಷಿಣ ಅಮೆರಿಕ ಮಡಗಾಸ್ಕರ್, ಮಲಯ, ಭಾರತ ಮುಂತಾದಲ್ಲೆಲ್ಲ ಬೆಳೆಯುತ್ತವೆ.

	ಈ ಕುಟುಂಬದ ಅತಿ ಮುಖ್ಯ ಮತ್ತು ಉಪಯುಕ್ತ ಉದಾಹರಣೆ ಎಳ್ಳು (ಸೇಸಮಮ್ ಇಂಡಿಕಮ್).  ಇದರ 2 ಪ್ರಬೇಧಗಳು ಭಾರತದಲ್ಲಿ ಬೆಳೆಯುತ್ತವಾದರೆ ಆಫ್ರಿಕಾದಲ್ಲಿ ಇತರ 16 ಪ್ರಬೇಧಗಳು ಕಾಣಸಿಗುತ್ತವೆ. 	 (ನೋಡಿ- ಎಳ್ಳು)

	ಪೆಡ್ಯಾಲಿಯೇಸೀ ಕುಟುಂಬದ ಇನ್ನೊಂದು ಸಸ್ಯ ಪೆಡ್ಯಾಲಿಯಮ್ ಮ್ಯೂರೆಕ್ಸ್ ವೈದ್ಯಕೀಯದಲ್ಲಿ ಇದು ಉಪಯುಕ್ತ.  ಇದರಿಂದ ಒಸರುವ ಅಂಟಾದ ದ್ರವವನ್ನು ನೀರು ಅಥವಾ ಹಾಲಿನ ಜೊತೆ ಬೆರೆಸಿ ಗರ್ಭಾಶಯದ ಕಾಯಿಲೆಗೆ ಔಷಧಿಯಾಗಿ ಹಾಗೂ ಮೂತ್ರಸ್ರಾವಕವಾಗಿ ಬಳಸುವುದಿದೆ.  ಆಫ್ರಿಕಾದಲ್ಲಿ ಇದರ ಸೊಪ್ಪನ್ನು ತರಕಾರಿಯಾಗಿ ಉಪಯೋಗಿಸುವುದುಂಟು.	(ಎ.ಸಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ